Sunday, June 12, 2011

ವಿಭೂತಿ ಫಾಲ್ಸ್ 2 km --->

ಉತ್ತರ ಕನ್ನಡದ ಜಲಕನ್ನಿಕೆಯರ ಸರಣಿಯಲ್ಲಿ ಸೇರುವ ಈ ವಿಭೂತಿ ಜಲಪಾತವನ್ನು ತಲುಪಲು ಸ್ವಲ್ಪ ಹರಸಾಹಸವನ್ನೇ ಮಾಡಬೇಕು! ಇದಕ್ಕೆ ಕಾರಣ - ಈ ಜಲಪಾತ ಅಡಗಿರುವುದು ಉತ್ತರ ಕನ್ನಡದ ಎತ್ತರದ ಘಟ್ಟಗಳ ಕೊರಕಲುಗಳಲ್ಲಿ. ಶಿರಸಿಯಿ೦ದ ಹೆಗಡೆಕಟ್ಟಾ, ದೇವನಳ್ಳಿ ಮಾರ್ಗವಾಗಿ ಗೋಕರ್ಣಕ್ಕೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಯಾಣಕ್ಕೆ ಹೋಗಲು ಇರುವ ಎಡತಿರುವಿನ ಸ್ಥಳದಿ೦ದ ಸುಮಾರು ೪-೫ ಕಿ.ಮೀ. ಮು೦ದೆ ಸಾಗಿದರೆ ವಡ್ಡಿ ಘಟ್ಟ ಇದಿರಾಗುತ್ತದೆ. ಕಿರಿದಾದ ಇಕ್ಕಟ್ಟಾದ ತಿರುವುಗಳಲ್ಲಿ ಘಟ್ಟವನ್ನು ಇಳಿದಾಕ್ಷಣ ಸಿಗುವುದು ಒಂದು ಹಳ್ಳಿ. ಬೆ೦ಗಳೂರಿನ೦ತಹ ಸದಾ ಜನನಿಬಿಡ, ಗೊ೦ದಲಮಯ, ದೂಷಿತ ಪ್ರದೇಶದಿ೦ದ ಈ ಹಳ್ಳಿಗೆ ಬ೦ದುಬಿಟ್ಟರೆ ಪರಿಸರಪ್ರೇಮಿಗಳಿಗೆ ಇದು ಸ್ವರ್ಗವೇ! ಹಸಿರು ಬಣ್ಣದ ವಿವಿಧ ರೂಪಗಳನ್ನು ಇಲ್ಲಿ ಆಸ್ವಾದಿಸಬಹುದು; ಸವಿಯುವ ಮನಸ್ಸಿದ್ದರೆ, ನೋಡುವ ಒಳಗಣ್ಣಿದ್ದರೆ ಮಾತ್ರ! ದೂರದ ಬೆಟ್ಟ ಹೊದ್ದಿರುವ ದಟ್ಟ ಕಾಡಿನ ನಿಗಿನಿಗಿಸುವ ಕಪ್ಪು ಹಸಿರು,ಅಲ್ಲಲ್ಲಿ ಹರಡಿಕೊ೦ಡಿರುವ ಅಡಿಕೆ ತೋಟಗಳ ಕುಡಿ ಹಸಿರು, ಘಟ್ಟದಡಿಯಲ್ಲಿರುವ ಭತ್ತದ ಗದ್ದೆಗಳ ಗಿಳಿಹಸಿರು, ಎತ್ತರದ ತೆ೦ಗುಮರಗಳ ದಟ್ಟ ತೋಟದ ಕ೦ಗೊಳಿಸುವ ಹಸಿರು, ಕತ್ತೆತ್ತಿ ಮೇಲೆ ನೋಡಿದರೆ 'ಆಕಾಶಾ ಇಷ್ಟೇ ಯಾಕಿದೆಯೋ' ಎ೦ಬ೦ತೆ ಪೈಪೋಟಿಯಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿ೦ತ ಮರಗಳ ಎಲೆ ಹಸಿರು, ಅದರಲ್ಲೇ ಅನೇಕ ವಿಧದ ಹಸಿರಿನ ಎಲೆಗಳನ್ನು ಹೊ೦ದಿದ ಮರಗಳ ಹಸಿರು ವರ್ಣವಿನ್ಯಾಸ, ಹೀಗೆ ಎಲ್ಲ ದಿಕ್ಕುಗಳಲ್ಲೂ ಗುಡ್ಡಬೆಟ್ಟಗಳ ಹಸಿರುಮಾಲೆಯಿ೦ದ ಸುತ್ತುವರೆದಿರುವ, ತು೦ಬಿದ ಹಸಿರುತಾರುಣ್ಯದ ನಿಸರ್ಗದೇವಿಯ
ತವರಿನ೦ತಿರುವ ಈ ಪ್ರದೇಶವೇ 'ಮಾಬಗಿ' ಎಂಬ ಪುಟ್ಟ ಹಳ್ಳಿ. ಮಾಬಗಿಯ ಬಸ್ ನಿಲ್ದಾಣದ ಎಡಭಾಗದಲ್ಲಿ -

  ವಿಭೂತಿ ಫಾಲ್ಸ್ ೨ ಕಿ.ಮೀ.  --->
  <--- ಯಾಣ ೯ ಕಿ.ಮೀ.

ಎ೦ಬ ಒ೦ದು ಫಲಕ ಸಿಗುತ್ತದೆ. ಇಲ್ಲಿಯವರೆಗೆ ಈ ಜಲಪಾತ ಇರುವುದರ ಸುಳಿವು ಎಲ್ಲಿಯೂ ಸಿಗುವುದಿಲ್ಲ!
ನಾನೂ ನನ್ನ ಫ್ರೆ೦ಡ್ಸ್ ಜೊತೆಯಲ್ಲಿ ಇಲ್ಲಿಗೆ ಬರಬೇಕಾದ್ರೆ ಸಾಕ್ ಸಾಕಾಗಿ ಹೋಯ್ತು! ರಣ ರಣ ಬಿಸಿಲಿನ ದಿವಸದಲ್ಲಿ ಯಾವ್ ಫಾಲ್ಸ್ ನಲ್ಲೂ ನೀರು ಇರಲ್ಲ ಅ೦ದ್ರೆ ನನ್ ಫ್ರೆ೦ಡ್ಸು ಕೇಳಲೇ ಇಲ್ಲ. ಇನ್ನೊ೦ದೆರ್ಡು ತಿ೦ಗಳಲ್ಲಿ ಎ೦ಟನೇ ಸೆಮಿಸ್ಟರ್ ಮುಗದ್ಮೇಲೆ ಎಲ್ಲ್ರೂ ಎಲ್ಲೆಲ್ಲೋ ಹೋಗ್ಬಿಡ್ತೀವಿ. ಅದಕ್ಕೆ, ಈಗ ಯಾವ್ದಾದ್ರು ಫಾಲ್ಸ್ ಗೆ ಹೋಗೋಣ ಅ೦ತ ಪಟ್ಟು ಹಿಡಿದ್ರು. ಕೊನೆಗೆ ವಿಭೂತಿ ಫಾಲ್ಸ್ ಗೆ ಹೋಗೋಣ ಅ೦ತ ಡೆಸೈಡ್ ಮಾಡಿದ್ವಿ. ಅವತ್ತು ಮೇ ೪, ೨೦೦೮. ಬೆಳಿಗ್ಗೆ ಹುಬ್ಬಳ್ಳಿಯಿ೦ದ ಟವೆರಾ ವೆಹಿಕಲ್ ನಲ್ಲಿ ನಾವು ೧೦ ಜನ ಫ್ರೆ೦ಡ್ಸು ಹೊರಟ್ವಿ. ಆದ್ರೆ ನಮ್ಮ್ ೧೦ ಜನರಲ್ಲಿ ಯಾರೂ ವಿಭೂತಿ ಜಲಪಾತವನ್ನ ಅದುವರೆಗೆ ನೋಡಿರ್ಲಿಲ್ಲ, ಕೇವಲ ಮಾಹಿತಿಯಷ್ಟೇ ಗೊತ್ತಿತ್ತು.!

   ಅ೦ತೂ ಇ೦ತೂ ಯಾಣ ಕ್ರಾಸ್ ವರೆಗೂ ಬ೦ದು ಅಲ್ಲಿಯವ್ರಿಗೆ ವಿಭೂತಿ ಫಾಲ್ಸ್ ಗೆ ಹೋಗೋ ರೂಟ್ ಕೇಳ್ಕೊ೦ಡ್ವಿ. ಅಷ್ಟೊತ್ತಿಗಾಗ್ಲೆ ೧೧ ಘ೦ಟೆ; ಬೇಸಿಗೆ ಸೂರ್ಯ ನೆತ್ತಿ ಮೇಲೆ ಉರೀತಾ ಇದ್ದ. ಅಲ್ಲಿ೦ದ ಮು೦ದೆ ಫಾಲ್ಸ್ ಗೆ ಹೋಗೋ ಹಾದಿ ಮಾತ್ರ ಎಲ್ಲೋ ಮಾಯಾ ಜಗತ್ತಿನ ತಿಳಿಯದ ದಾರಿಹಾಗಿತ್ತು! ರಸ್ತೆಯ ಅಕ್ಕಪಕ್ಕ ಗೋಡೆ ಕಟ್ಟಿದ ಹಾಗೆ ದಟ್ಟವಾದ ಕಾಡು. ಬಿಸಿಲು ಅಷ್ಟಿದ್ದ್ರೂ ರೋಡಿನ ಮೇಲೆ ಸೂರ್ಯನ ಕಿರಣಗಳು ಬೀಳದಷ್ಟರ ಮಟ್ಟಿಗೆ ಮರಗಳು ರಸ್ತೆಯ ಮೇಲೆ ಛಾವಣಿಯ೦ತೆ ಇದ್ದ್ವು. ಆ ರೋಡ್ ನಲ್ಲಿ ಒ೦ದು ನರಮಾನವನ ಸುಳಿವೂ ಇಲ್ಲ, ಒ೦ದು ಸೈನ್ ಬೋರ್ಡೂ ಇಲ್ಲ! ಇದ್ನೆಲ್ಲಾ ನೋಡಿ ನಮ್ ಡ್ರೈವರ್ ಉಸರ್ಲಿಕ್ಕೆ ಶುರು ಮಾಡಿದ್ರು - 'ನಾ ನಿಮಗ್ ಅಲ್ಲೇ ಹೇಳಿದ್ನಲ್ಲ್ರೀ, ಅದಕ್ ಹೋಗೋ ದಾರಿ ಗೊತ್ತಿಲ್ಲಾ೦ದ್ರ ಯಾಕ್ ಹ೦ತಾಪರಿ ಗುದ್ದ್ಯಾಡೋದು? ಮತ್ತ್ ಬ್ಯಾರೆ ಕಡೆಯರ ಹೋಕ್ಕಿದ್ದ್ವಿ. ಈ ಹಾದ್ಯಾಗ್ ನೋಡ್ರಿ ಯಾರೂ ಇಲ್ಲಾ. ಯಾರರ ಮಚ್ಚ್-ಗಿಚ್ಚ್ ತೊಗೊಂಡ್ ಬೆನ್ನ್ ಹತ್ತಿದ್ರ, ಎಲ್ಲ್ ತಪ್ಪಿಶ್ಗೊತೀರಿ...?!'. ಅದಕ್ಕ ನಾವು - 'ಇಲ್ಲಾ ಇಲ್ಲೆ ಒ೦ಚೂರ್ ಮು೦ದ ಹೋದ್ರ ಬರ್ತದ್ರೀ, ನೀವ ಆರಾಮ್ ಆಗಿ ಡ್ರೈವ್ ಮಾಡ್ರಿ'. ಮು೦ದೆ ವಡ್ಡೀ ಘಾಟ್ ಬ೦ದೇ ಬಿಟ್ಟಿತು. ಅದರ ಕರ್ವ್ಸ್ ಮತ್ತು ಆ ಮಣ್ಣಿನ ರೋಡ್ ನೋಡಿ ನಮ್ಮ್ ಡ್ರೈವರ್ ಮತ್ತೆ ತಮ್ಮ್ ಮ೦ತ್ರ ಶುರು ಮಾಡಿದ್ರು - 'ಏ, ಇದೇನ್ ಆಗ೦ಗಿಲ್ಲ್ ಬಿಡ್ರಿ, ಸುಮ್ನ ನನ್ನ್ ಮಾತ್ ಕೇಳ್ರಿ ಇಲ್ಲೆ ಯಾಣಕ್ಕ ಹೋಗೋಣೂ. ಈ ರೋಡ್ನ್ಯಾಗ್ ಅದು ಹಿ೦ತಾ ಘಾಟ್ ನ್ಯಾಗ್ ಏನರೆ ಟೈರ್ ಪ೦ಚರ್ ಆದ್ರ ನಡಕೋತ ವಾಪಸ್ ಬರೋದ್ ಆಕ್ಕೆತ್ತಿ...' ಹಾಗೆ ಹೀಗೆ ಅ೦ತ ಹೇಳೀದ್ರು. ನಿಜಕ್ಕೂ ಆ ಘಟ್ಟದ ರಸ್ತೆ ತು೦ಬ ಹದಗೆಟ್ಟಿದ್ದರಿ೦ದ ವಾಹನ ಸ೦ಚಾರ ತು೦ಬ ಕಠಿಣವಾಗಿತ್ತು. ಅವ್ರಿಗೆ ಹೇಗೋ ಸಮಾಧಾನ ಹೇಳಿ ಅ೦ತೂ ಆ ಪುಟ್ಟ ಹಳ್ಳಿ ಮಾಬಗಿಗೆ ಬ೦ದ್ವಿ. ಆ ಬಸ್ ಸ್ಟಾಪ್ ನಿ೦ದ ಒಳಗಿರುವ ೨ ಕಿ.ಮೀ. ದಾರಿ ಕೇವಲ ಚಕ್ಕಡಿಯ ದಾರಿ ಇತ್ತೋ ಏನೋ, ಆದ್ರೂ ನಮ್ಮ್ ಡ್ರೈವರ್ ದೊಡ್ಡ್ ಮನಸ್ಸು ಮಾಡಿ - 'ಇಷ್ಟೆಲ್ಲಾ ತ್ರಾಸ್ ಪಟ್ಟೇವ೦ತ, ಈ ಮಣ್ಣಿನ್ ಹಾದ್ಯಾಗ್ ಹೋಗೇಬಿಡೋಣ; ಹೆ೦ಗೂ ಹಾದಿ ತಪ್ಪಿಶ್ಗೊ೦ಬ೦ದೇವಿ, ಎಲ್ಲ್ಯರ ಒ೦ದ್ ಕಡೆ ಹೋಕ್ಕೇವಿ' ಆ ದಾರಿಯಲ್ಲಿ ಕಷ್ಟ ಪಟ್ಟು ಸುಮಾರು ಒ೦ದು ಮೈಲ್ ಡ್ರೈವ್ ಮಾಡಿದ್ರು. ಕೊನೆಯ ಅರ್ಧ ಕಿ. ಮೀ. ಮಾತ್ರ ದಟ್ಟವಾದ ಅಡವಿಯಲ್ಲಿ ಮರಗಳ ಸ೦ದಿನಲ್ಲಿ ಹೀಗೆ ನಡೆಯಲೇಬೇಕು.


    ವಿಭೂತಿ ಜಲಪಾತ ಆಳೆತ್ತರದ ಬಂಡೆಗಲ್ಲುಗಳ ತುದಿಯಿಂದ ಎರಡು ಹಂತಗಳಲ್ಲಿ ಧುಮುಕುವ ನೀಳವಾದ ಜಲಧಾರೆ. ವೈಶಿಷ್ಟ್ಯವೆಂದರೆ, ಕಾಲಾಂತರದಲ್ಲಿ ಇಲ್ಲಿನ ಹೆಬ್ಬಂಡೆಗಳು ಸುಣ್ಣದಕಲ್ಲುಗಳಿ೦ದ ಮಾಡಲ್ಪಟ್ಟಿರುವುದರಿ೦ದ ಇದಕ್ಕೆ 'ವಿಭೂತಿ ಜಲಪಾತ' ಎಂಬ ಹೆಸರು.



ಜಲಪಾತದ ರಮಣೀಯತೆ ಮತ್ತು ನಿಸರ್ಗದ ಮುಗ್ಧತೆ ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡೇಬಿಟ್ಟಿತು, ಒಂದೇ ನೋಟದಲ್ಲಿ! ಸುಸ್ತಾದ ಪ್ರಯಾಣದ ದಣಿವನ್ನು ಮತ್ತು ಬಿಸಿಲಿನ ತಾಪವನ್ನು ನಿವಾರಿಸಿಕೊಳ್ಳಲು ನೀರಿಗಿಳಿದಾಗ ಆದ ಅನುಭವವೇ ಬೇರೆ. ಮೇ ತಿಂಗಳ ಬಿಸಿಲಿನ ಧಗೆ-ಬೇಗೆಯಲ್ಲಿ ಜಲಧಾರೆಯ ನೀರು ಬಿಸಿಯಾಗಿರಬಹುದು ಎ೦ಬ ನಮ್ಮ ಅನಿಸಿಕೆ ಕ್ಷಣಮಾತ್ರದಲ್ಲಿ ಸುಳ್ಳಾಗಿಬಿಟ್ಟಿತು! ಮಂಜಿನ ಮೂಲದಿಂದ ಹರಿದು ಬಂದಿರುವಂತೆ ಜಲಧಾರೆಯು ನಮ್ಮ ಮೈ ಚಳಿಯನ್ನು ಹೆಚ್ಚಿಸಿತು. ಬಹುಶಃ ಈ ಜಲಧಾರೆ ದಟ್ಟ ಕಾಡಿನ ಯಾವುದೋ ಮೂಲೆಯಲ್ಲಿ ಹುಟ್ಟಿ, ಸದಾ ಹಸಿರಿನ ಹೊದಿಕೆಯಿಂದ ಸೂರ್ಯನ ಶಾಖದ ಪ್ರಭಾವಕ್ಕೊಳಗಾಗದೆ ಹರಿದು ಬಂದಿದುದರಿಂದ ಬೇಸಿಗೆಯಲ್ಲೂ ಅಷ್ಟು ತಂಪಾಗಿರಬಹುದೋ ಏನೋ.


 
    ಅಂತಹ ಕೊರೆಯುವ ಚಳಿಯುಂಟುಮಾಡುವ ತಂಪಾದ ನೀರಿನಲ್ಲಿ ಮಿಂದಾಗ ಸಮಯದ ಪರಿಕಲ್ಪನೆಯೇ ಇರಲಿಲ್ಲ. ನೀರಿನ ಆಟದ ಮೋಜಿನ ಜೊತೆಗೆ ಹಾಸ್ಯಪ್ರಿಯರಾದ ನನ್ನ ಗೆಳೆಯರು ನನ್ನನ್ನು ಒಂದು ಲಘು ಪ್ರಹಸನಕ್ಕೆ ಸಿಲುಕಿಸಿಯೇ ಬಿಟ್ಟರು! ನೀರಿಗಿಳಿಯಲೆಂದು ಬರ್ಮೋಡ ಧರಿಸಿ, ಸೊಂಟಕ್ಕೆ ಒಂದು ಟಾವೆಲ್ಲ್ ಸುತ್ತಿಕೊಂಡಿದ್ದ ನನ್ನ ತೆಳುವಾದ ಮೈಕಟ್ಟನ್ನು ನೋಡಿ - "ಏ... ಸಂಜೀವ್ ನೋಡ್ರಿಲೆ..  ಹೆಂಗ್ ಕಾಣಾಕತ್ತಾನ...! ಚೊಕ್ಕ,, ಅಡಿಕೆ ಮರ ಹತ್ತೊವ್ರಂಗ್ ಕಾಣ್ತಾನ....! ಏನ್ ಪಾ ಸಂಜೀವ..., ದಿವ್ಸಕ್ಕ ಎಷ್ಟ್ ಅಡಿಕಿ ಮರ ಹತ್ತತೀ..?! ಆ ತೋಟದಾಗ ನಮಗೂ ಒಂದಿಷ್ಟ್ ಅಡಿಕಿ ಹರದ್ ಕೊಡೋ!" ಎಂದು ನನ್ನ ಗೆಳೆಯೆನೊಬ್ಬ ಗೇಲಿ ಮಾಡಿದಾಗ ಎಲ್ಲರ ಕೇಕೆ-ನಗು ಆ ಬಂಡೆಗಲ್ಲುಗಳ ನಡುವೆ ಪ್ರತಿಧ್ವನಿಸಿತ್ತು!

   ಇ೦ತಹ ಮೋಜಿನ ಸಮಯದ ಮರೆಯಲಾಗದ ಅನುಭವಗಳು ಈಗಲೂ - "ಮನಸಿನ ಪುಟಗಳ ನಡುವೆ... ನೆನಪಿನ ನವಿಲುಗರಿ" - ಯಂತೆ ಭದ್ರವಾಗಿ ಅಚ್ಚೊತ್ತಿದಂತಿವೆ!